ಚಕ್ರವರ್ತಿ ತ್ರೈಲೋಕ್ಯ -
1880-1970. ಬಂಗಾಲದ ಒಬ್ಬ ಕ್ರಾಂತಿವೀರ. ಈಗಿನ ಬಾಂಗ್ಲಾದೇಶದ ಮೈಮೆನ್ ಸಿಂಗ್ ಜಿಲ್ಲೆಯ ಒಂದು ಗ್ರಾಮದಲ್ಲಿ 1889ರ ಮೇ ತಿಂಗಳಲ್ಲಿ ಜನಿಸಿದರು. ತಂದೆ ದುರ್ಗಾಚರಣ ಚಕ್ರವರ್ತಿ ರಾಷ್ಟ್ರೀಯ ಭಾವನೆಯುಳ್ಳವರಾಗಿದ್ದರು. ಸ್ವದೇಶಿ ಬಟ್ಟೆಗಳನ್ನೇ ಉಪಯೋಗಿಸುವಂತೆ ಕುಟುಂಬದವರನ್ನು ಪ್ರೋತ್ಸಾಹಿಸುತ್ತಿದ್ದರು. ತ್ರೈಲೋಕ್ಯರ ಸಹೋದರ ಕಾಮಿನಿ ಮೋಹನ್ ಚಕ್ರವರ್ತಿ ಮೈಮೆನ್ ಸಿಂಗ್‍ನ ಕ್ರಾಂತಿಕಾರಿಗಳಿಗೆ ಬೆಂಬಲ ನೀಡುತ್ತಿದ್ದರು. ತ್ರೈಲೋಕ್ಯ ಚಕ್ರವರ್ತಿಯೂ ರಾಷ್ಟ್ರೀಯ ಭಾವನೆಗಳನ್ನು ಬೆಳೆಸಿಕೊಂಡಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಪ್ರವೇಶ ಪರೀಕ್ಷೆಗೆ ಕುಳಿತಿದ್ದಾಗ ಪರೀಕ್ಷೆಗೆ ಹಿಂದಿನ ದಿನ ಬಂಧನಕ್ಕೊಳಗಾದರು. ಅಲ್ಲಿಗೆ ಅವರ ವಿದ್ಯಾರ್ಥಿಜೀವನ ಕೊನೆಗೊಂಡಿತು.

ತ್ರೈಲೋಕ್ಯರ ರಾಷ್ಟ್ರಪಜ್ಞೆ ಸ್ವದೇಶಿ ಚಳವಳಿಯಿಂದ ಪ್ರಚೋದನೆಗೊಂಡಿತು. 1906ರಲ್ಲಿ ಅವರು ಅನುಶೀಲನ ಸಮಿತಿಯನ್ನು ಸೇರಿದರು. ಅವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಹಲವರು ; ಮೊದಲು ಪುಲಿನ್ ಬಿಹಾರಿ ದಾಸ್, ಮಖನ್ ಲಾಲ್ ಸೆನ್ ಮತ್ತು ರಬೀಂದ್ರ ಮೋಹನ್ ಸೆನ್ ; ಅನಂತರ ಸಿ.ಆರ್. ದಾಸ್ ಮತ್ತು ಸುಭಾಷ್ ಚಂದ್ರ ಬೋಸ್, ಬಂಕಿಮಚಂದ್ರ ಮತ್ತು ರಮೇಶದತ್ತರ ಕೃತಿಗಳೂ ಮ್ಯಾಟ್ಸಿನಿ, ಗಾರಿಬಾಲ್ಡಿ ಮುಂತಾದವರನ್ನು ಕುರಿತ ಗ್ರಂಥಗಳೂ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದುವು.

ಅನುಶೀಲನ ಸಮಿತಿಯ ಸದಸ್ಯರಾಗಿ ತ್ರೈಲೋಕ್ಯರು ಇಡೀ ಜಿಲ್ಲೆಯಲ್ಲಿ ಸಂಘಗಳನ್ನೂ ವ್ಯಾಯಾಮಶಾಲೆಗಳನ್ನೂ ಸ್ಥಾಪಿಸಿ ಯುವಕರನ್ನು ಸಂಘಟಿಸಿದರು. ಈ ಸಂದರ್ಭದಲ್ಲಿ ಅವರಿಗೆ ಅನುಶೀಲನ ಸಮಿತಿಯ ಹಿರಿಯ ನಾಯಕರಾದ ಪುಲಿನ್ ಬಿಹಾರಿ ದಾಸರ ಸಂಪರ್ಕವುಂಟಾಯಿತು. 1908ರಲ್ಲಿ ದೋಣಿಯೊಂದನ್ನು ಕದ್ದ ಆಪಾದನೆಯ ಮೇಲೆ ತ್ರೈಲೋಕ್ಯರು ಬಂಧನಕ್ಕೆ ಒಳಗಾದರು. 1909ರಲ್ಲಿ ಬಿಡುಗಡೆ ಹೊಂದಿ ಢಾಕಾಗೆ ಹೋದರು. ಢಾಕಾ ಪಿತೂರಿ ಮೊಕದ್ದಮೆಯಲ್ಲಿ ತ್ರೈಲೋಕ್ಯರೂ ಒಬ್ಬ ಆಪಾದಿತರಾಗಿದ್ದರೂ ಪೋಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡರು. ಅಗರ್‍ತಲಾದ ಉದಯಪುರ ಬೆಟ್ಟಕ್ಕೆ ಓಡಿಹೋಗಿ ಅಲ್ಲಿ ತಮ್ಮ ಗುಂಪಿನ ಒಂದು ಶಾಖೆ ಸ್ಥಾಪಿಸಿದರು. 1912ರಲ್ಲಿ ಒಂದು ಕೊಲೆಯ ಆಪಾದನೆ ಹೊರಿಸಿ ಅವರನ್ನು ಬಂಧಿಸಲಾಯಿತು. ಆದರೆ ಆಪಾದನೆ ರುಜುವಾತಾಗಲಿಲ್ಲ. ಅವರ ಬಿಡುಗಡೆಯಾಯಿತು.

1913-1914 ರಲ್ಲಿ ಮಾಲ್ಯ, ರಾಜ್‍ಷಾಹಿ, ಕೊಮಿಲ್ಲಾ ಮುಂತಾದ ಜಿಲ್ಲೆಗಳಲ್ಲಿ ಅವರು ಸಂಘದ ಶಾಖೆಗಳನ್ನು ಸ್ಥಾಪಿಸಲು ಪ್ರವಾಸ ಮಾಡಿದರು. 1914ರಲ್ಲಿ ಬಾರಿಸಾಲ್ ಪಿತೂರಿ ಸಂಬಂಧದಲ್ಲಿ ಅವರನ್ನು ಕಲ್ಕತ್ತೆಯಲ್ಲಿ ಬಂಧಿಸಿ ಹತ್ತು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಅಂಡಮಾನಿಗೆ ಕಳಿಸಲಾಯಿತು.
ಅವರು 1924ರಲ್ಲಿ ಬಿಡುಗಡೆಯಾಗಿ ಭಾರತಕ್ಕೆ ಬಂದರು. ಚಿತ್ರರಂಜನದಾಸರ ಸೂಚನೆಯ ಮೇರೆಗೆ ದಕ್ಷಿಣ ಕಲ್ಕತ್ತ ರಾಷ್ಟ್ರೀಯ ಶಾಲೆಯ ಕಾರ್ಯಭಾರವನ್ನು ವಹಿಸಿಕೊಂಡರು. 1927ರಲ್ಲಿ ಅವರನ್ನು ಬಂಧಿಸಿ ಮಾಂಡಲೆಗೆ ಕಳಿಸಲಾಯಿತು. 1928ರಲ್ಲಿ ಅವರು ಭಾರತಕ್ಕೆ ಮರಳಿದರು. ಆದರೆ ಅವರನ್ನು ನವಖಾಲಿ ಜಿಲ್ಲೆಯ ಹಾಟಿಯ ದ್ವೀಪದಲ್ಲಿ ಸ್ಥಾನಬದ್ಧತೆಯಲ್ಲಿಡಲಾಯಿತು. ಅಲ್ಲಿಂದ ಬಿಡುಗಡೆಯಾದ ಅನಂತರ ಉತ್ತರ ಭಾರತಕ್ಕೆ ಹೋಗಿ ಹಿಂದೂಸ್ತಾನ್ ರಿಪಬ್ಲಿಕನ್ ಸಂಘವನ್ನು ಸೇರಿದರು. ಬರ್ಮದಲ್ಲಿದ್ದ ಭಾರತದ ಕ್ರಾಂತಿಕಾರಿಗಳನ್ನು ಭೇಟಿಯಾಗಲು ಅವರನ್ನು ಬರ್ಮಕ್ಕೆ ಕಳಿಸಿಕೊಡಲಾಯಿತು. ಅವರು ಭಾರತ ರಾಷ್ಟ್ರೀಯ ಕಾಂಗ್ರೇಸ್ಸಿನಲ್ಲೂ ಕೆಲಸ ಮಾಡಿದರು. 1929ರಲ್ಲಿ ಲಾಹೋರಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. 1930ರಲ್ಲಿ ಅವರನ್ನು ರಾಜ್‍ಷಾಹಿಯಲ್ಲಿ ಬಂಧಿಸಿ ದಕ್ಷಿಣ ಭಾರತದಲ್ಲಿ ಬಂಧನದಲ್ಲಿಡಲಾಯಿತು. 1938ರಲ್ಲಿ ಬಿಡುಗಡೆ ಹೊಂದಿ ಸುಭಾಷ್ ಚಂದ್ರ ಬೋಸರನ್ನು ಭೇಟಿಯಾಗಿ ರಾಮ್‍ಘರ್ ಕಾಂಗ್ರೇಸ್ ಸಭೆಯಲ್ಲಿ ಭಾಗವಹಿಸಿದರು. ಎರಡನೆಯ ಮಹಾಯುದ್ಧ ಆರಂಭವಾದಾಗ ಭಾರತ ಸೈನ್ಯದಲ್ಲಿ ಸಶಸ್ತ್ರ ಬಂಡಾಯವನ್ನು ಸಂಘಟಿಸಲು ಪ್ರಯತ್ನಿಸಿದರು. ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ಅವರನ್ನು ಚಿತ್ತಗಾಂಗಿನಲ್ಲಿ ಬಂಧಿಸಲಾಯಿತು. ಬಿಡುಗಡೆಯಾದ ಮೇಲೆ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಸೆರೆಯಾದರು.

ತ್ರೈಲೋಕ್ಯರು 1946ರಲ್ಲಿ ಬಿಡುಗಡೆ ಹೊಂದಿ ನವಖಾಲಿಯಲ್ಲಿ ರಚನಾತ್ಮಕ ಕಾರ್ಯದಲ್ಲಿ ತೊಡಗಿದರು. ಭಾರತ ಸ್ವತಂತ್ರವಾದ ಮೇಲೆ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಉಳಿದು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. 1954ರಲ್ಲಿ ಅಲ್ಲಿಯ ಪ್ರಾಂತೀಯ ಸಭೆಗೆ ಸಂಯುಕ್ತ ಪ್ರಗತಿವಾದಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಹೊಂದಿದರು. 1958ರಲ್ಲಿ ಅವರ ಚುನಾವಣೆಯಲ್ಲಿ ಪಾಕಿಸ್ತಾನ್ ಸರ್ಕಾರ ತಳ್ಳಿಹಾಕಿತು. ರಾಜಕೀಯ ಚಟುವಟಿಕೆಗಳಲ್ಲೂ ಸಮಾಜ ಕಲ್ಯಾಣ ಕಾರ್ಯಗಳಲ್ಲೂ ಭಾಗವಹಿಸದಂತೆ ನಿರ್ಬಂಧ ವಿಧಿಸಿತು. 1970ರ ವರೆಗೂ ಅರು ತಮ್ಮ ಸ್ವಗ್ರಾಮದಲ್ಲಿ ಒಂಟಿ ಬಾಳನ್ನು ಬಾಳಿ, ಅನಾರೋಗ್ಯನಿಮಿತ್ತ ಚಿಕಿತ್ಸೆಗಾಗಿ ಭಾರತಕ್ಕೆ ಬಂದರು. ಅದೇ ವರ್ಷ ದೆಹಲಿಯಲ್ಲಿ ನಿಧನರಾದರು. ಅವರು ಕೊನೆಯವರೆಗೂ ಅವಿವಾಹಿತರಾಗಿದ್ದು ದೇಶಕ್ಕಾಗಿ ದುಡಿದರು. ಅವರನ್ನು ಜನರು 'ಮಹಾರಾಜ್ ಎಂದು ಕರೆಯುತ್ತಿದ್ದರು.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ